ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನಲ್ಲಿ ನೇತ್ರಾವತಿ ದಂಡೆಯ ಮೇಲಿರುವ ಒಂದು ಊರು. ಪುತ್ತೂರಿಗೆ 13ಕಿಮೀ ಈಶಾನ್ಯಕ್ಕಿದೆ. ಪ್ರಾಚೀನ ಕಾಲದಲ್ಲಿ ಸಮುದ್ರದಿಂದ ಹೇರಳವಾಗಿ ಉಪ್ಪು ತಯಾರಿಸಿ ತಂದು ಇಲ್ಲಿ ಮಾರುತ್ತಿದ್ದರು. ಘಟ್ಟದ ಮೇಲಿನವರು ದವಸ, ಸಂಬಾರ ಮತ್ತಿತರ ತಮ್ಮ ವಸ್ತುಗಳನ್ನು ನೀಡಿ ಉಪ್ಪು ಮತ್ತಿತರ ವಸ್ತುಗಳನ್ನು ಕೊಂಡುಕೊಂಡು ಹೋಗುತ್ತಿದ್ದರು. ಆದ್ದರಿಂದ ಈ ಸ್ಥಳಕ್ಕೆ ಉಪ್ಪಿನಂಗಡಿ ಎಂಬ ಹೆಸರು ಬಂದಿತು. ಶ್ರೀರಂಗಪಟ್ಟಣದ ಪತನದ ತರುವಾಯ 1800ರಲ್ಲಿ ಈ ನಗರವನ್ನು ವಶಪಡಿಸಿಕೊಳ್ಳಲು ವಿಠಲ ಹೆಗ್ಗಡೆ ಹಾಗೂ ಸುಬ್ಬರಾವ್ ಪ್ರಯತ್ನಿಸಿದ್ದರು. 1882ರಲ್ಲಿ ಪುತ್ತೂರು ತಾಲ್ಲೂಕು ಆಗುವವರೆಗೆ ಉಪ್ಪಿನಂಗಡಿ ಅದೇ ಹೆಸರಿನ ತಾಲ್ಲೂಕಿನ ಕೇಂದ್ರವಾಗಿತ್ತು.

ತುಳು ಭಾಷೆಯಲ್ಲಿ ಈ ಊರನ್ನು ಉಬಾರ್ ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾಗಳು ಇಲ್ಲಿ ಸಂಗಮಿಸುತ್ತವೆ. ಇದೊಂದು ಪ್ರಮುಖ ಪುಣ್ಯ ಕ್ಷೇತ್ರವೆಂದು ಪರಿಗಣಿತವಾಗಿದೆ. ನೇತ್ರಾವತಿ ನದಿಯ ನಡುವೆ ಸಹಸ್ರಲಿಂಗೇಶ್ವರ ಲಿಂಗವಿದೆ. ದಡದ ಮೇಲೆ ಈ ದೇವರ ಗುಡಿಯೂ ಇದೆ. ಈಶ್ವರನ ಪರಿವಾರದೇವತೆಗಳಾದ ಕಲ್ಕುಡದೈವ ಮತ್ತು ಮಾಂಕಾಳಿಯ ಗುಡಿಗಳು ಸಮೀಪದಲ್ಲಿವೆ. ಕುಂಭಮಾಸದಲ್ಲಿ ಇಲ್ಲಿ ಮೂರು ಜಾತ್ರೆಗಳು ನಡೆಯುತ್ತವೆ. ಇಲ್ಲಿ 400 ವರ್ಷಗಳಷ್ಟು ಹಳೆಯದಾದ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದೆ. ಉಪ್ಪಿನಂಗಡಿ ಮೂಲಕ ಹಾಸನ  ಮಂಗಳೂರು ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ಪ್ರಥಮದರ್ಜೆಯ ಕಾಲೇಜಿದೆ.       	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ